ಪಾಲಿಗೊನೇಸೀ  
ದ್ವಿದಳ ಸಸ್ಯಗಳ ಒಂದು ಕುಟುಂಬ.  ಇದು ಕ್ಯಾರಿಯೋಪಿಲೇಲೀಸ್ ಗಣಕ್ಕೆ ಸೇರಿದೆ.  ಇದರಲ್ಲಿ 40 ಜಾತಿಗಳೂ ಸುಮಾರು 750-800 ಪ್ರಭೇದಗಳೂ ಇವೆ.  ಇವು ಮುಖ್ಯವಾಗಿ ಉತ್ತರದ ಸಮಶೀತೋಷ್ಣವಲಯಗಳಲ್ಲಿ ಬೆಳೆಯುತ್ತವೆ.  ಇವುಗಳಲ್ಲಿ ಹೆಚ್ಚಿನವು ಮೂಲಿಕೆಗಳು.  ಕೆಲವು ಪೊದೆ ಸಸ್ಯಗಳು ಆಥವಾ ಮರಗಳು.  ಬಳ್ಳಿಗಳೂ ಇರುವುದುಂಟು (ಪಾಲಿಗೋನಮ್ ಕಾನ್‍ವಾಲ್ವುಲಸ್).

ಇವುಗಳ ಎಲೆಗಳು ಸರಳ ರೀತಿಯವು; ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿವೆ.  ವೃತ್ತ ಪತ್ರಗಳು ಸಂಯೋಗಗೊಂಡು ಓಕ್ರಿಯೆ ಎಂಬ ಮುಸುಕಿನಂಥ ರಚನೆಯಾಗಿವೆ.  ಇದು ಮೊಗ್ಗಿನ ಎಳೆಯ ಎಲೆಗಳನ್ನೂ ರಕ್ಷಿಸುತ್ತದೆ.  ಪರ್ವತಗಳಲ್ಲಿ ಬೆಳೆಯುವ ಪ್ರಭೇಧಗಳ ಎಲೆಗಳಲ್ಲಿ ತುಪ್ಪುಳಿನಂಥ ಮೃದು ರೋಮಗಳುಂಟು.  ಈ ಕುಟುಂಬದ ಸಸ್ಯಗಳ ಹೂಗಳು ದ್ವಿಲಿಂಗಿಗಳು ಕೆಲವೊಮ್ಮೆ ಏಕಲಿಂಗಿಗಳಾಗಿರುವುದೂ ಉಂಟು. ಇವು ಸೈಮೋಸ್ ಮಾದರಿಯ ಸಂಯುಕ್ತ ಪುಷ್ಪ ಮಂಜರಿಗಳಲ್ಲಿ ಅರಳುವುವು.

ಈ ಕುಟುಂಬ ಸಸ್ಯಗಳು ಮುಖ್ಯವಾಗಿ ಉತ್ತರದ ಶೀತವಲಯದಲ್ಲಿ ಬೆಳೆಯುತ್ತವೆ.  ಉಷ್ಣವಲಯದಲ್ಲಿ ಬೆಳೆಯುವ ಜಾತಿಗಳೂ ಇಲ್ಲದಿಲ್ಲ.  ಉದಾ: ಕೊಕೊಲುಬಾ-ಇದು 125 ಪ್ರಭೇಧಗಳನ್ನೊಳಗೊಂಡಿದೆ.  ಅಮೆರಿಕದ ಉಷ್ಣ ಪ್ರದೇಶಗಳಿಗೆ ಇದು ಸೀಮಿತವಾಗಿದೆ.  ಅಮೆರಿಕದಲ್ಲಿ ಪಾಲಿಗೋನಮ್ ವ್ಯಾಪಕವಾಗಿದೆ.  ಉಷ್ಣವಲಯದಲ್ಲಿ ಏಷ್ಯಾ ಖಂಡದಿಂದ ಆಸ್ಟ್ರೇಲಿಯಾದವರೆಗೆ ಮತ್ತು ಅಮೆರಿಕದಲ್ಲಿ ಚಿಲಿಯವರೆಗೆ ಇದು ಬೆಳೆಯುತ್ತದೆ.  ಬ್ರಿಟಿಷ್ ದ್ವೀಪಗಳಲ್ಲಿ ಪಾಲಿಗೋನಮ್ ಜಾತಿಯ 14 ಪ್ರಭೇಧಗಳು ರೂಮೆಕ್ಸ್‍ನ 12 ಪ್ರಭೇದಗಳೂ ಕಾಣದೊರೆಯುತ್ತವೆ.

ಸಂಯುಕ್ತ ಸಂಸ್ಥಾನಗಳಲ್ಲಿ ಈ ಕುಟುಂಬದ ಪ್ರಧಾನ ಜಾತಿಯಾದ ಎರಿಯೋಗೋನಮ್‍ವ ಸುಮಾರು 200 ಪ್ರಭೇದಗಳು ಬೆಳೆಯುವುವು.  ಅಲ್ಲದೆ ರೂಮೆಕ್ಸ್, ಕೊಂಡೆಮಲ್ಲಿ (ಪಾಲಿಗೋನಮ್) ಕಾಡುಗೋಧಿ (ಫ್ಯಾಗೋಪೈರವಮ್) ಮತ್ತು ರೂಮ್‍ಗಳ (ರೇವಾಚಿನ್ನಿ) ಹುಲುಸಾಗಿ ಬೆಳೆಯುತ್ತವೆ.

ಭಾರತದಲ್ಲಿ ಸಾಮಾನ್ಯವಾಗಿ ಬೆಳೆಯುವ ಈ ಕುಟುಂಬದ ಸಸ್ಯಗಳು ಇವು; ನೀರನಿಗೆ ಸೊಪ್ಪು (ಪಾಲಿಗೋನಮ್ ಬಿಜಿಮ್), ರಕ್ತರೋಹಿತ (ಪಾಲಿಗೋನಮ್ ಗ್ಲಾಬ್ರಮ್) ಬಿಳೀಕಣಿಗಲು (ಪಾಲಿಗೋನಮ್ ಬೈನ್ಯಾನ್ಸ್).                                                   (ಎಂ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ